ಕರ್ನಾಟಕ ಸರ್ಕಾರ
ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ
ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ   ವೆಬ್ ಸೈಟ್ : rcmysore-portal.kar.nic.in

ಶ್ರೀ ಚಲುವನಾರಾಯಣಸ್ವಾಮಿಯವರ ದೇವಸ್ಥಾನಗಳಲ್ಲಿ ಪ್ರಮುಖ ಉತ್ಸವಗಳೆಂದರೆ

 • ಶ್ರೀ ವೈರಮುಡಿ ಬ್ರಹ್ಮೋತ್ಸವ
 • ಶ್ರೀ ಕೃಷ್ಣರಾಜಮುಡಿ ಉತ್ಸವ
 • ಶ್ರೀ ರಾಜಮುಡಿ ಉತ್ಸವ
 • ಶ್ರೀ ರಾಮಾನುಜಾಚಾರ್ಯರ ತಿರುನಕ್ಷತ್ರ

ಶ್ರೀ ವೈರಮುಡಿ ಬ್ರಹ್ಮೋತ್ಸವ

ವೈರಮುಡಿಗೆ ಪ್ರತ್ಯೇಕವಾದ ಇತಿಹಾಸ ಇದೆ. ಕೃಷ್ಣಾವತಾರವಾದ ಒಂದು ಕಾಲ ಭಕ್ತ ಪ್ರಹ್ಲಾದನ ಮಗನಾದ ವಿರೋಚನನು ಕ್ಷೀರಾಬ್ಬಿಶಾಯಿಯಾದ ಅನಿರುದ್ಧ ಭಗವಂತನ ಸೇವೆಗೆ ತಾನೂ ನಿತ್ಯ ಸೂರಿಗಳಂತೆ ಪ್ರವೇಶ ಮಾಡಿ ಸ್ವಾಮಿಯ ಕೈಂಕಾರ್ಯಗಳಿಂದ ಆನಂದಗೊಳ್ಳುತಿದ್ದನು. ಅದರೆ ವಿರೋಚನನು ಸಮಯ ಸಾಧಿಸಿ ಭಗವಂತನು ಶಯನಿಸುವ ಸಮಯದಲ್ಲಿ ಅವರ ಕಿರೀಟವನ್ನು ಅಪಹರಿಸಿ, ಭೂಲೋಕಕ್ಕೆ ಬಂದು ಅಲ್ಲಿಂದ ಪಾತಾಳದಲ್ಲಿ ಅಡಗಿದನು.ಇದನ್ನು ಕಂಡ ಗರುಡನು ವಿರೋಚನನ್ನು ಜಯಿಸಿ ಈ ಕಿರೀಟವನ್ನು ತರುತ್ತಿರುವಲ್ಲಿ ಗರುಡನು ತಾನು ತಂದ ಕಿರೀಟ ಶ್ರೀಕೃಷ್ಣನಿಗೆ ಧರಿಸಲು ಅದು ಸರಿಯಾಗಲಿಲ್ಲ. ಆಗ ಶ್ರೀಕೃಷ್ಣನೊಡನೆ ಹೋಗಿ ಆತನ ಆರಾಧ್ಯಾ ದೇವರಾದ ಶ್ರೀಚಲುವನಾರಾಯಣಸ್ವಾಮಿಗೆ ಧರಿಸಲು ಕಿರೀಟ ಸರಿಯಾಗಿ ಸ್ವಾಮಿಯವರಿಗೆ ಹೊಂದಿಕೊಂಡಿತು.ಶತಯೋಜನೆ ವಿಸ್ತೀರ್ಣವುಳ್ಳ ಭಗವಂತನ ಕಿರೀಟ ಶ್ರೀಚಲುವನಾರಾಯಣಸ್ವಾಮಿಯವರಿಗೆ ಹೊಂದಿದ್ದನ್ನು ಕಂಡುವೈನತೆಯನ್ನು ಎಲ್ಲಿ ನಿನ್ನ ಮಹಿಮೆ ಎಂದು ಇದು ಭೂಲೋಕದ ಜನರಿಗೆ ಈ ಮೂಲಕ ಭಗವಂತನ ಆಸೆಯಿಂದ ಲಭ್ಯವಾಯಿತೆಂದು ಹೇಳಿ ಶ್ರೀಚಲುವನಾರಾಯಣಸ್ವಾಮಿಯನ್ನು ತನ್ನ ಹೆಗಲ ಮೇಲೆ ಹೊತ್ತು ಉತ್ಸವ ಮಾಡಿದ ಕಾರಣ ವೈರಮುಡಿ(ವೈರ ಅಂದರೆ ವಜ್ರ, ಮುಡಿ ಎಂದರೆ ಕಿರೀಟ) ಎಂದು ಹೆಸರಾಗಿ ಪುರಾತನ ಕಾಲದಿಂದಲೂ ಜನರ ಬಾಯಲ್ಲಿ ವೈರಮುಡಿಯಾಗಿ ಪರಿವರ್ತನೆಗೊಂಡಿದೆ.

ಮೀನಮಾಸ ಹಸ್ತನಕ್ಷತ್ರದ ದಿವಸ ಶ್ರೀನಾರಾಯಣಸ್ವಾಮಿಯ ಜಯಂತಿಯಂದು  ಅವಭೃತಸ್ನಾನ ನಡೆಯುತ್ತದೆ. ಅವಭೃತಸ್ನಾನದ ದಿನದಿಂದ ಹಿಂದೆ ಒಂಭತ್ತು ದಿವಸದ ಉತ್ಸವ ನಡೆಯುತ್ತದೆ. ಇದರಲ್ಲಿ 4ನೇ ತಿರುನಾಳ್ ದಿವಸ ವೈರಮುಡಿ ಕಿರೀಟ ಧಾರಣ ಮಹೋತ್ಸವ ನಡೆಯುತ್ತದೆ. ಈ ಉತ್ಸವದಲ್ಲಿ ಎರಡು ವೇಳೆಯು ಯಾಗಶಾಲೆಯಲ್ಲಿ ಹೋಮ ಹವನ, ವೇದಾಪಾರಾಯಣ ಮತ್ತು ದಿವ್ಯಪ್ರಬಂಧ ಪಾರಾಯಣ ನಡೆಯುತ್ತದೆ. ವರ್ಷದಲ್ಲಿ ನಡೆಯುವ ಎಲ್ಲಾ ಉತ್ಸವಗಳಲ್ಲಿ ಇದು ಪ್ರಧಾನವಾದುದು. ಅಂದು ವೈರಮುಡಿ ಕಿರೀಟ ಧರಿಸಿದ ಸ್ವಾಮಿಯನ್ನು ಎಷ್ಟೆ ದೂರದಲ್ಲಿ ಯಾವ ದಿಕ್ಕಿನಲ್ಲಿದ್ದರೂ ಭಕ್ತಾದಿಗಳು ದರ್ಶನ ಮಾಡಬಹುದು. ಗರುಡವಾಹನದಲ್ಲಿ ವೈರಮುಡಿಯಿಂದ ಅಲಂಕೃತವಾದ ಸ್ವಾಮಿಯನ್ನು ಭಕ್ತರನ್ನು ಅನುಗ್ರಹಿಸಲೆಂದು ನಾಲ್ಕು ಕಡೆಗೂ ತಿರುಗಿಸುತ್ತಾ ಸೇವೆ ಕೊಡುವ ವಾಡಿಕೆ ಈಗಲೂ ನಡೆದುಕೊಂಡು ಬಂದಿರುತ್ತದೆ.

ಈ ಪ್ರತಿಷ್ಠಿತ ವೈರಮುಡಿ ಬ್ರಹ್ಮೋತ್ಸವವನ್ನು ವೀಕ್ಷಿಸಲು ದೇಶವಿದೇಶಗಳಿಂದಲೂ ಜನರು ಬರುತ್ತಾರೆ. ವೈರಮುಡಿ ಉತ್ಸವದ ದಿನ ಒಂದು ಲಕ್ಷಕ್ಕೂ ಮೇಲ್ಪಟ್ಟುಭಕ್ತಾದಿಗಳು ಸ್ವಾಮಿಯ ದರ್ಶನ ಪಡೆಯತ್ತಾರೆ.ಹಿಂದೆ ಮೈಸೂರು ಅರಸರ ಅರಮನೆಯಲ್ಲಿದ್ದ ಈ ಕಿರೀಟವನ್ನು ಸಕಲ ರಾಜ ಮರ್ಯಾದೆಯೊಂದಿಗೆ ಮೇಲುಕೋಟೆಗೆತರಲಾಗುತ್ತಿತ್ತು. ಈ ವೈರಮುಡಿ ಕಿರೀಟದ ಭದ್ರತೆಯ ದೃಷ್ಠಿಯಿಂದ ವೈರಮುಡಿ, ರಾಜಮುಡಿ, ಕೃಷ್ಣರಾಜಮುಡಿ ಕಿರೀಟಗಳನ್ನು ಮಂಡ್ಯ ಜಿಲ್ಲಾ ಖಜಾನೆಯಲ್ಲಿಇಡಲಾಗಿದೆ. ವೈರಮುಡಿ ದಿವಸ ಬೆಳ್ಳಿಗ್ಗೆ ಮಂಡ್ಯ ಜಿಲ್ಲಾ ಖಜಾನೆಯಿಂದ ವೈರಮುಡಿ ಮತ್ತು ರಾಜಮುಡಿ ತಿರುವಾಭರಣಗಳನ್ನು ಮೇಲುಕೋಟೆಗೆ ತರುವ ದಾರಿಯುದ್ಧಕ್ಕೂ ಭಕ್ತಾಧಿಗಳಿಂದ ಪೂಜಿಸಲ್ಪಡುತ್ತದೆ. ಇವರೆಡು ತಿರುವಾಭರಣಗಳನ್ನು ಮರ್ಯಾದೆಯೊಂದಿಗೆ ಚಿನ್ನದ ಪಲ್ಲಕ್ಕಿಯಲ್ಲಿರಿಸಿ ಊರಿನಲ್ಲಿ ಮೆರವಣಿಗೆ ಮಾಡಿ ದೇವಸ್ಥಾನಕ್ಕೆ ಬರಮಾಡಿಕೊಳ್ಳುವ ಸಂಪ್ರದಾಯ ಇಂದಿಗೂ ನಡೆದು ಬಂದಿರುತ್ತದೆ. 4ನೇ ತಿರುನಾಳ್ ದಿವಸ ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 3 ಗಂಟೆವರೆಗೂ ಚಲುವನಾರಾಯಣಸ್ವಾಮಿಗೆ ಧರಿಸಿ ಉತ್ಸವವಾಗುತ್ತದೆ. ಮಾರನೆಯ ಬೆಳ್ಳಿಗ್ಗೆ ರಾಜಮುಡಿ ತಿರುವಾಭರಣ ದೇವಸ್ಥಾನದಲ್ಲಿಯೆ ಇದ್ದು, 7 ದಿವಸಗಳ ಕಾಲ ಸ್ವಾಮಿಗೆಧಾರಣೆಯಾಗಿ ಕೊನೆಯಲ್ಲಿ ಮಂಡ್ಯ ಜಿಲ್ಲಾಖಜಾನೆಗೆ ಸೇರುತ್ತದೆ. ಈ ವೈರಮುಡಿಯನ್ನು ದೇವರು ಧರಿಸಿಕೊಂಡಾಗ ಮಾತ್ರ ದರ್ಶನ ಮಾಡಿಕೊಳ್ಳಬೇಕು. ಕೈಯಲ್ಲಿ ಮುಟ್ಟಬಾರದೆಂಬ ನಂಬಿಕೆ ಜನರಲ್ಲಿ ಇದೆ. ರಾಮಾವತಾರದಲ್ಲಿ ಕೈಕೇಯಿಯ ಹಠಮಾರಿತನ ಪ್ರಸಂಗದಿಂದ ಪಟ್ಟಾಭಿಷೇಕಕ್ಕೆ ನಿಗದಿಯಾದ ದಿನ ರಾಮನು ವನವಾಸಕ್ಕೆತೆರಳಿದನು ಆದಿಶೇಷನೆ ಲಕ್ಷ್ಮಣನಾಗಿ ಅವತರಿಸಿದ್ದು,ಈ ಕಲಿಯುಗದಲ್ಲಿ ಆದಿಶೇಷನೆ ರಾಮಾನುಜನಾಗಿ ಜನಿಸಿದ ಆಚಾರ್ಯರು ರಾಮಪ್ರಿಯನಾದ ಶ್ರೀಚಲುವನಾರಾಯಣಸ್ವಾಮಿಗೆ ಪಟ್ಟಾಭಿಷೇಕಕ್ಕೆ ಗೊತ್ತುಮಾಡಿ ಪುಷ್ಯ ನಕ್ಷತ್ರದ ಶುಭ ದಿನದಿಂದಲೆ ವೈರಮುಡಿ ಕಿರೀಟವನ್ನು ಧರಿಸಿ ಉತ್ಸವ ಮಾಡಿದರು.(ಮೀನಪುಷ್ಯ)ಈಗಲೂ ಪಾಲ್ಗುಣ ಪುಷ್ಯ ನಕ್ಷತ್ರ(ಮೀನ)ದಲ್ಲೆ ವೈರಮುಡಿ ಉತ್ಸವ. ವೈರಮುಡಿ ಉತ್ಸವದ ಅಂಗವಾಗಿ ಶ್ರೀಚಲುವನಾರಾಯಣಸ್ವಾಮಿಯವರಿಗೆ ರಥೋತ್ಸವ, ತೆಪ್ಪೋತ್ಸವ ಸಹ ನಡೆಯುತ್ತದೆ. ವೈರಮುಡಿ ಬ್ರಹ್ಮೋತ್ಸವ ವೀಕ್ಷಿಸಲು ಬರುವ ಸಹಸ್ರಾರು ಭಕ್ತಾದಿಗಳಿಗೆ ಜಿಲ್ಲಾ ಆಡಳಿತದ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ,ಚುಚ್ಚುಮದ್ದು, ನೈರ್ಮಲೀಕರಣದ ವ್ಯವಸ್ಥೆ ಅರಕ್ಷಕ ಬಂದೋಬಸ್ತ್, ಸಾರಿಗೆ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಮೇಲುಕೋಟೆಯು ಯಾವುದೇ ಮುಖ್ಯರಸ್ತೆಯಲ್ಲಿಬರುವುದಿಲ್ಲ. ಈ ಪುಣ್ಯಕ್ಷೇತ್ರವು ಮೈಸೂರು ನಾಗಮಂಗಲ ಮಾರ್ಗದಲ್ಲಿ ಜಕ್ಕನಹಳ್ಳಿಯಿಂದ ಪಶ್ಚಿಮಕ್ಕೆ 8 ಕಿ.ಮೀ. ಅಂತರದಲ್ಲಿ ಎತ್ತರಕ್ಕೆ ಬೆಟ್ಟದ ಮೇಲೆ ಇದೆ. ಮೇಲುಕೋಟೆಗೆ ಮಂಡ್ಯ ನಗರದಿಂದ 35 ಕಿ.ಮೀ ಮೈಸೂರಿನಿಂದ 51 ಕಿ.ಮೀ, ನಾಗಮಂಗಲದಿಂದ 29 ಕಿ.ಮೀ, ಕೆ.ಆರ್.ಪೇಟೆಯಿಂದ 24 ಕಿ.ಮೀ. ದೂರದಲ್ಲಿದೆ. ಎಲ್ಲಾ ಕಡೆಯಿಂದಲೂ ಮೇಲುಕೋಟೆಗೆ ಬರಲು ಬಸ್ಸುಗಳ ವ್ಯವಸ್ಥೆ ಇದೆ.

ವಸಂತೋತ್ಸವ

ವೈಶಾಖಶುದ್ಧ ‘ಏಕಾದಶಿಯಿಂದ ಇದು ಪ್ರಾರಂಭ ಮೊದಲೆರಡು ದಿನ ಶ್ರೀ ತಿರುನಾರಾಯಣ ಸ್ವಾಮಿಗೆ ವಸಂತೋತ್ಸವ, ನಂತರ ಅಂಕುರಾರ್ಪಣ ( ಪ್ರಾರಂಭ) ಮಾರನೆ ದಿನ ಮತ್ತು ಮೂರನೆ ದಿನ ಎರಡು ಪಲ್ಲಕಿಯಲ್ಲಿ ಪ್ರತ್ಯೇಕವಾಗಿ ಶ್ರೀಭೂದೇವಿಯನ್ನು ಬಿಜಯ ಮಾಡಿಸಿ ಅಲಂಕಾರ ಮಾಡಿ, ಗೌಸ್‍ಹಾಕಿ, ಅರಮನೆ ತೋಟಕ್ಕೆ ಉತ್ಸವವಾದ ಬಳಿಕ ಶ್ರೀ ಚಲುವರಾಯನಸ್ವಾಮಿ ಉತ್ಸವ ಬರುವಾಗ ಅಡ್ಡಗಟ್ಟುವುದು ಒಂದು ವಿಶೇಷ, ಇದು ಸಣ್ಣಮಕ್ಕಳಿಗೆ ತುಂಬಾ ವಿನೋದ. ಪೌರ್ಣಿಮಿಯಂದು ಬಿಳಿಯ ಉಡುಪಿನಲ್ಲಿ ಶ್ರೀ ಭೂದೇವಿ ಸಮೇತ ತೋಟದಲ್ಲಿ ವಸಂತೋತ್ಸವ. ಅಂದು ರಾತ್ರಿ ಬೀದಿಯಲ್ಲಿ ಕೋಡೈ ತಿರುನಾಳ್ ಉತ್ಸವ. ಇದಕ್ಕೆ ಮೊದಲು ನಮ್ಮಾಳ್ವಾರ್ ಸನ್ನಿಧಿಗೆ ಉತ್ಸವ ನಡೆದಿರುತ್ತದೆ.

ಪಲ್ಲವೋತ್ಸವ

ಜ್ಯೇಷ್ಠಬಹುಳಶ್ರವಣದಿಂದ ರೋಹಿಣಿವರೆಗೆ ನಡೆಯುತ್ತದೆ. ಇದರ ಅಂಗವಾಗಿ ಮಧ್ಯಾಹ್ನ ಶ್ರೀ ಚಲುವರಾಯಸ್ವಾಮಿಗೆ ಅಭಿಷೇಕ ಅಲಂಕಾರಪೂಜೆ ಪ್ರಬಂಧ ಪಾರಾಯಣ, ತಾಲಾಟ್ಟು ಹಳಿ, ಎಳೆಯ ಚಿಗುರುಗಳನ್ನು ಹಾಸಿ, ಅದರಲ್ಲಿ ಶಯನ ಪಕ್ಕದಲ್ಲಿ ಚಪ್ಪಗಾಲು ಮಂಟಪದಲ್ಲಿ ಕೂರ್ಚದಲ್ಲಿ ಅವಾಹನೆ ಮಾಡಿ ಶಯನ ನಡೆಯುತ್ತದೆ. ಇದು ಏಳು ದಿನಗಳು ರಾಮಾನುಜಾಚಾರ್ಯರ ಸನ್ನಿಧಿ ಬಳಿ ಜರುಗುತ್ತದೆ. ನಂತರ ವಾಹನ ಉತ್ಸವಗಳಾಗಿ ತಿರುವಾರಾಧನೆ ಪಡಿಯೇತ್ತ ನಡೆಯುತ್ತದೆ.

ಪ್ರಥಮ ಏಕಾದಶಿ

ಆಷಾಡದ ಪ್ರಥಮ ಏಕಾದಶಿಯಿಂದ ಐದು ದಿನಗಳು ರಾತ್ರಿಯಲ್ಲಿ ಉಯ್ಯಾಲೋತ್ಸವ ನಡೆಯುತ್ತದೆ.

ಶ್ರೀಕೃಷ್ಣ ಜಯಂತಿ

ಗೋಕುಲಾಷ್ಟಮಿ ( ಕೃಷ್ಣ ಜಯಂತಿ) ಆಗಸ್ಟ್, ಸೆಪ್ಟೆಂಬರ್ ‍ನಲ್ಲಿ ಇರುತ್ತದೆ. ಅಂದು ರಾತ್ರಿ ದೇವಸ್ಥಾನದಲ್ಲಿ ಕೃಷ್ಣನಿಗೆ ಅಭಿಷೇಕ, ವಿಶೇಷ ಪೂಜೆ, ಶಾತ್ತುಮೊರೈ ಮಾರನೆ ದಿನ ಕೃಷ್ಣ ದೇವರ ಸನ್ನಿಧಿಗೆ ಉತ್ಸವ, ಶ್ರೀ ಚಲುವರಾಯಸ್ವಾಮಿ ಎದುರಿನಲ್ಲಿ ಶಿಕ್ಯೋತ್ಸವ ನಡೆಯುತ್ತದೆ.

ತಿರುವಾಡಿಪ್ಟೂರಂ

ಆಷಾಡ ಬಹುಳ ಮೃಗಶಿರದಿಂದ ಪುಬ್ಬಾ ನಕ್ಷತ್ರದವರೆಗೆ ನಡೆಯುತ್ತದೆ. ಆಗ ಅಮ್ಮನವರ ಸನ್ನಿಧಿಯಲ್ಲಿ ಎರಡು ವೇಳೆಯೂ ಪ್ರಬಂಧ ಪಾರಾಯಣ ಸಾಯಂಕಾಲ ಪಲ್ಲಕ್ಕಿ ಉತ್ಸವ, ರಾತ್ರಿ ಅಲಂಕಾರ ತಿರುವಾರಾಧನೆ ಮಹಾಮಂಗಳವಾಗುತ್ತದೆ. ತಿರುವಾಡಿ ಪ್ಟೂರಂ ಅಥವಾ ವರ್ಧಂತಿಯಂದು ಬೆಳಿಗ್ಗೆ ಶೇಷವಾಹನ, ಶಾತ್ತುಮೊರೈ, ಹನ್ನೆರಡು ಕಲಶಾ ಅಭೀಷೇಕ, ತಿರುಪ್ಪಾರೈ, ಶಾತ್ತುಮೊರೈ, ಚಿನ್ನದ ಪಲ್ಲಕ್ಕಿಯಲ್ಲಿ ಚಲುವರಾಯನ ಸಹಿತ ಸೇರಿ ಉತ್ಸವ, ರಾತ್ರಿ ಕನ್ನಡಿಮನೆಯಲ್ಲಿ ಶೇರ್ತಿಸೇವೆ ( ಶಯನ). ತಿರುವಾಯಮೊಳಿ ಶಾತ್ತುಮಾರೈ ತಾಲಾಟ್ಟು( ಲಾಲಿ ಹಾಡಿನ) ಏಕಾಂತಸೇವೆ ನಡೆದು ಮುಕ್ತಾಯ ಅಧಿಕಾರಿಗಳ ನೇತೃತ್ವದಲ್ಲಿ ಸೀಲು ಪಾಲಿಘಂಟೆ, ಮಾರನೆಯ ದಿನ ಕನ್ನಡಿಯ ಮನೆಯಲ್ಲಿ ಸಾಯಂಕಾಲದವರೆಗೂ ಸೇವೆ. ಒಟ್ಟು ಹನ್ನೆರಡು ಪ್ರಬಂಧ ಶಾತ್ತುಮೊರೈ, ರಾತ್ರಿ ದೇವದಾಸಿಯರಿಂದ ಅಮ್ಮನವರಿಗೆ ಕೈಂಕರ್ಯ ನಂತರ ಶ್ರೀ ಚಲುವರಾಯಸ್ವಾಮಿ ಉತ್ಸವ ಸ್ವಸ್ಥಾನಕ್ಕೆ.

ಪವಿತ್ರೋತ್ಸವ

ಬಾದ್ರಪದಶುದ್ಧ ‘ಏಕಾದಶಿಯಂದು ಏಳು ದಿನಗಳು. ಆಗ ಶ್ರೀಯವರಿಗೆ ಪವಿತ್ರಧಾರಣೆ ಬೆಳಿಗ್ಗೆ ವಾಹನಗಳು ಪಡಿಯೇತ್ತ. ರಾತ್ರಿ ಪಲ್ಲಕ್ಕಿ ಉತ್ಸವ ರಾಮಾನುಜರ ಸನ್ನಿಧಿ ಬಳಿ ಶ್ರೀ ಚಲುವರಾಯಸ್ವಾಮಿಗೆ ಬಿಜಯ ಮಾಡಿ ಅಷ್ಟೋತ್ತರ ಪೂಜೆ ವಿಶೇಷಗಳು ಯಾಗಶಾಲೆ, ಸ್ವಾಮಿಯ ನವರಂಗದಲ್ಲಿ ರಾಜ ಒಡೆಯರ ಕಂಬದ ಬಳಿ ಮಹಾ ಕುಂಬ ಸ್ಥಾಪನೆ ಏಳು ದಿನವೂ ಪೂಜೆ ಶ್ರೀಮನ್ನಾರಾಯಣನ ಆವಾಹನೆ ಕುಂಚಕ್ಕೆ ಅದರ ಮುಂಭಾಗದಲ್ಲಿ ದೊಡ್ಡ ಮಂಡಲ ನಿರ್ಮಾಣಮಾಡಿ, ವೈಕುಂಠನಾಥನ ಸನ್ನಿಧಿ ಆವಾಹನೆ ಮಾಡಿ ನಾಲ್ಕು ಕಡೆಯು ನಾಲ್ಕು ವೇದಸಾರವಾದ ಋಗ್ವೇದ,ಯಜುರ್ವೇದ, ಸಾಮವೇದ, ಅಥರ್ವಣವೇದ ಬಾಗಿಲು ನಿರ್ಮಾಣ ಆಯಾ ದೇವತಾ ಆವಾಹನೆ ಪೂಜೆಗಳನ್ನು ನಡೆಸಿ ಕಡೆದಿನ ವಿಸರ್ಜನೆ ಮಾಡುತ್ತಾರೆ. ವೇದಪಾರಾಯಣ ಪ್ರಬಂಧ ಪಾರಾಯಣ ಏಳೂ ದಿನವೂ ನಡೆಯುತ್ತದೆ. ಇದು ವರ್ಷದಲ್ಲಿ ನಡೆಯುವ ದೋಷಗಳನ್ನು ನಿವಾರಿಸುವ ಉತ್ಸವವಾಗಿದೆ.

ನವರಾತ್ರಿ ಉತ್ಸವ

ಅಶ್ವಯುಜ ಪ್ರಥಮದಿಂದ ದಶಮಿವರೆಗೆ ಆಗ ಅಮ್ಮನವರಿಗೆ ಸಣ್ಣಮೇಳದಿಂದ ಪಲ್ಲಕಿ ಉತ್ಸವ ನಂತರ ಶೇಷವಾಹನ, ದೇಶಿಕರ ಸನ್ನಿಧಿ ಬಳಿ  ನವರಾತ್ರಿ ಮಂಟಪ ಶಾತ್ತುಮೊರೈ, ನಂತರ ಒಳಕ್ಕೆ ಉತ್ಸವ ನಡೆದು ದೇವಸ್ಥಾನಕ್ಕೆ ಮರಳುತ್ತಾರೆ. ದಿನವೂ ರಾತ್ರಿ ವೇಳೆ ಜಾಳಿಗೆ ಶ್ರೀಯವರ ಪಾದದಲ್ಲಿ ಇಟ್ಟು ನಂತರ ಅಮ್ಮನವರ ಶ್ರೀ ಚಲುವರಾಯಸ್ವಾಮಿಯವರ ಪಾದದಲ್ಲಿಟ್ಟು ಪೂಜೆ ಆಗ ಎಲೆ ಅಡಿಕೆ, ತೀರ್ಥ ವಿನಿಯೋಗ ನಡೆಯುತ್ತದೆ. ವಿಜಯದಶಮಿಯಂದು ಶ್ರೀ ಚಲುವರಾನಸ್ವಾಮಿ ರಾಜದರ್ಬಾರ್ ಅಲಂಕಾರದಿಂದ ಜಂಜೂಸವಾರಿ(ಕುದುರೆ) ವಾಹನ ಪಾರ್ವಟೆಗೆ ಅಲ್ಲಿಂದ ಮರಳುವಾಗ ಶ್ರೀ ಅಮ್ಮನವರ ಶೇಷವಾಹನ ಎದುರಿನಲ್ಲಿ ಹೆಬ್ಬಾಗಿಲ ಬಳಿ ಸಂಧಿಸಿ ಎದುರು ಬದುರಾಗಿ ಊರಿನಲ್ಲಿ ಉತ್ಸವ ನಡೆದು ಅಂದು ನಾರಾಯಣ ಸ್ವಾಮಿಯವರಿಗೂ ರಾಜಾಲಂಕಾರ ಸೇವೆ. ಮಹಾನವಮಿಯಂದು ಆಯುಧಪೂಜೆ. ಇಲ್ಲಿ ವೈಭವದಿಂದ ಜರುಗುತ್ತದೆ. ಈ ಹತ್ತು ದಿನಗಳಿಂದ ಪುರಾಣೋತ್ಸವ ಕಾಲದಲ್ಲಿ (ಮೇಲುಕೋಟೆ) ಯಾದವಗಿರಿ ಮಹಾತ್ಮೆ ವರನ ಅಮ್ಮನವರ ಸನ್ನಿಧಿ ಬಳಿ ನಡೆಯುತ್ತದೆ. ಕಡೆ ದಿನ ಪುರಾಣ ಮುಕ್ತಾಯವಾದ ತಕ್ಷಣ ಶ್ರೀ ಚಲುವರಾಯರಿಗೆ ಶೇಷವಾಹನ ನಡೆಯುತ್ತದೆ.

ಕೃತ್ತಿಕೋತ್ಸವ (ಕಾರ್ತಿಕ ದೀಪ)

ಇದು ಕಾರ್ತಿಕ ಮಾಸದ ಶುದ್ಧಪೌರ್ಣಿಮೆಯಂದು ನಡೆಯುತ್ತದೆ. ಅಂದು ಯಾಗಶಾಲೆಯಲ್ಲಿ ದೀಪಗಳ ಪ್ರತಿಷ್ಠೆ ಆನಂತರ ದೇವಾಲಯಕ್ಕೆ ದೀಪಾಲಂಕಾರ, ನಾರಾಯಣಸ್ವಾಮಿ ಅಮ್ಮನವರು, ಶ್ರೀ ಚಲುವರಾಯಸ್ವಾಮಿ ಎಲ್ಲರಿಗೂ ವೇದಮಂತ್ರದಿಂದ ಪುಟ್ಟಾರ್ತಿ (ಇದು ಕುಂದು ಮಾಡಿ ತುಪ್ಪದಿಂದ ಉರಿಸುವ ಒಂದು ದೀಪ) ನಂತರ ಒಳ ಪ್ರಾಕಾರದಲ್ಲಿ ಉತ್ಸವ ನಾಲ್ಕನೆ ಅರ್ಚನೆಯಿಂದ ನಂತರ ಹೊರಗೆ ಗರುಡ ಗಂಬದ ಮೇಲೆ ದೀಪ ಸ್ಥಾಪನೆ ಎಣ್ಣೆ ಬಟ್ಟೆಯನ್ನು ದೇವರೆದುರಿಗೆ ಸುತ್ತುವುದು (ಕರಗ) ನಂತರ ಮಂಟಪವಾಹನ, ಸ್ವಾಮಿಗೆ ಎಣ್ಣೆ ಅಲಂಕಾರ ನಂತರ ಒಂದು ತಿಂಗಳ ಕಾಲ ಉತ್ಸವವಿಲ್ಲ. ಶ್ರೀ ಚಲುವರಾಯನಿಗೆ ಕೈಶಿಕ ದ್ವಾದಶಿ - ಅಂದು ಬೆಳಗಿನ ಜಾವಕ್ಕೆ ಶ್ರೀ ಚಲುವರಾಯನಸ್ವಾಮಿಗೆ ಹನ್ನೆರಡು ಅವತಾರ ಸೇವೆ ಮತ್ತು ಮಂಗಳಾರತಿ, ಶ್ರೀಭಟ್ಟರ್‍ರವರಿಗೆ ವಿಶೇಷ ಮರ್ಯಾದೆ ಕೈಶಿಕ ಪುರಾಣ ಶಾತ್ತುಮೊರೈ.

ಉತ್ತಾನ ದ್ವಾದಶಿ

ಅದು ಶ್ರೀ ಚಲುವರಾಯಸ್ವಾಮಿ ಪುಷ್ಪ ಬೃಂದಾವನ ಉತ್ಸವ ಬೃಂದಾವನ ಬಳಿ ಮಂಟಪ ನೋಟ ಅಷ್ಟೋತ್ತರ ವಿಶೇಷ ಪೂಜೆಗಳು ಜರುಗುತ್ತದೆ.

ಧನುರ್ಮಾಸ

ಇದು ಡಿಸೆಂಬರ್ 16 ರಿಂದ ಪ್ರಾರಂಭ. ಈ ತಿಂಗಳು ಶ್ರೀಕೃಷ್ಣನ ಭಕ್ತೆ ಶ್ರೀ ಅಂಡಾಳ್ ಗೋದಾದೇವಿ ವ್ರತವನ್ನು ಆಚರಿಸಿದ ತಿಂಗಳು. ಆಗ ಬೆಳಗಿನ ಜಾವದ ಪೂಜೆ ತಿರುಪ್ಪಾವೈ ದಿನವೂ ಒಂದು ಪದ್ಯದ ಶಾತ್ತುಮೊರೈ, ಗದ್ಯತ್ರಯ ಪಠನ, ರಾತ್ರಿ ನಾಲಾಯಿರಂ ದಿವ್ಯ ಪ್ರಬಂಧ ಪಠನ ನಡೆಯುತ್ತದೆ. ಡಿಸೆಂಬರ್ 19, 20 ರಲ್ಲಿ ನೂರುತಡಾ ಉತ್ಸವ ಜರುಗುತ್ತದೆ. ಶ್ರೀ ಭೂದೇವಿ ಅವರಿಗೆ ಅಭೀಷೇಕ ಉತ್ಸವ ಬಿಂದಿಗೆಯಲ್ಲಿ ಸಕ್ಕರೆ ಪೊಂಗಲು, ತುಂಬಿ ದೇವನಿಗೆ ಅರ್ಪಣೆ. ಮುಕ್ಕೋಟಿ ದ್ವಾದಶಿ ಅಂದು ಶ್ರೀತಿರುನಾರಾಯಣ ಸ್ವಾಮಿಯವರಿಗೆ ಚಿನ್ನದ ಕವಚವನ್ನು ಧಾರಣೆ ಮಾಡುತ್ತಾರೆ. ವರ್ಷಕ್ಕೆ ಒಂದು ಸಲ ಧಾರಣೆ ಮಾಡುವುದು, ಮೊದಲ ದಿನ ವೈಕುಂಠ ಏಕಾದಶಿಯಂದು ವಿಶೇಷ ಪೂಜೆಗಳು ದೇವಾಲಯದಲ್ಲಿ ಜರುಗುತ್ತದೆ.

ಕೊಠಾರೋತ್ಸವ

ಇದು ನಮ್ಮಾಳ್ವಾರ್ ರಚಿಸಿದ ತಿರುವಾಯ್‍ಮೊಳಿ ಪ್ರಬಂದಕ್ಕೆ ಏರ್ಪಟ್ಟ ಉತ್ಸವ. ಜನವರಿ 3 ರಂದು ಅಂಕುರಾರ್ಪಣ. 4ರಂದು(ಜನವರಿ) ಉತ್ಸವ ಪ್ರಾರಂಭ ಇಲ್ಲಿಯ ವೇದಾಂತಚಾರ್ಯರ ಸನ್ನಿಧಿಗೆ ಶ್ರೀ ಚಲುವರಾಯಸ್ವಾಮಿಯನ್ನು ಬಿಜಯ ಮಾಡಿಸುತ್ತಾರೆ. ಮದ್ಯ ಅಂಗಳದಲ್ಲಿ ಎತ್ತರ ಮರದ ಮಂಟಪದ(ಪುಪ್ಪಕದಲ್ಲಿ) ಕೆಳಭಾಗದ ಎರಡು ಭಾಗದಲ್ಲೂ ಹನ್ನೆರಡು ಆಳ್ವಾರ್‍ಗಳನ್ನೂ ಆಚಾರ್ಯರುಗಳನ್ನೂ ಬಿಜಯ ಮಾಡಿಸುತ್ತಾರೆ. ನಂತರ ಎಲ್ಲರಿಗೂ ಆರಾಧನೆ. ವೇದವಿಣಪ್ಪಂ ಆದ ಬಳಿಕ ಶ್ರೀ ಚಲುವರಾಯಸ್ವಾಮಿಯನ್ನು ಮೊದಲು ಮುಂದೆ ಇರುವ ಚಪ್ಪರದಲ್ಲಿ ನಾಲ್ಕು ಕಡೆ ತಿರುವಾರಾಧನೆಯಿಂದ ಉತ್ಸವ, ದಕ್ಷಿಣ ಮುಖವಾದ ಭಾಗದಲ್ಲಿ ಪರಿಚಾರಕರು ಶ್ರೀಯವರ ಪಾದುಕೆಯನ್ನು ತಲೆಯ ಮೇಲೆ ಬಿಜಯ ಮಾಡಿಸಿಕೊಳ್ಳುತ್ತಾರೆ. ಅನಂತರ ವಿಪ್ವಕ್ಸೇನರರು ನಮ್ಮಾಳ್ವಾರ್ ತಿರುಮಂಗೈಳ್ವಾರ್ ಅವರಿಗೆ ಭಟ್ಟರು ಅರುಳಪ್ಪಾಡು ಹೇಳಿ ಪರಿವಟ್ಟ ಮಾಲೆ ಪಾದುಕಾ ಸ್ವರ್ಶ ಮಾಡುತ್ತಾ ಮರ್ಯಾದೆ ಮಾಡುತ್ತಾರೆ. ಅಲ್ಲಿಂದ ಸ್ವಲ್ವ ಮುಂದೆ ಬಂದು ಪಶ್ಚಿಮಾಭಿಮುಖವಾಗಿ ದೇವರು ನಿಂತಾಗ ಪೊಯ್ಯಾಳ್ವರ್ ಗೆ ಮಾಡುತ್ತಾರೆ ಪೇಯಾಳ್ವಾರ ತಿರೆಮಳಿಶೈಪ್ಪಿರ್ಯಾ, ಭಟ್ಟರ ಪೀರಾನ್(ಪೆರಿಯಾಳ್ವಾರ್) ಇವರುಗಳಿಗೆ ಮರ್ಯಾದೆ ಅನಂತರ ಸ್ವಲ್ವ ಮುಂದರೆ ಉತ್ತರದ ಕಡೆ ತಿರುಗಿ ನಿಂತರೆ ಕುಲಶೇಖರನ್ ತೊಂಡಲಡಿಪ್ಪುಡಿ(ಇವರಲ್ಲಿ ಒಬ್ಬರು ರಾಜರು, ಇನ್ನೊಬ್ಬರು ಬ್ರಾಹ್ಮಣರು) ನಂತರ ತಿರುಪ್ಪಾಣನ್ ಮಧುರ ಕವಿ(ಇವರಲ್ಲಿ ಒಬ್ಬರು ಹರಿಜನರು ಒಬ್ಬರು ಸಂತರು) ತಿರುಕ್ಕಚ್ಚಿನಂಬಿನಾಥಮುನಿ ಹೀಗೆ ಮೂರು ಜೋಡಿಯಾಗಿ ಮರ್ಯಾದೆ ನಡೆಯುತ್ತದೆ. ಸ್ವಲ್ಪ ಮುಂದೆ ಪೂರ್ವಕ್ಕೆ ತಿರುಗಿದಾಗ ಶ್ರೀರಾಮಾನುಜರಿಗೆ ಮತ್ತು ಕೂರತ್ತಾಳ್ವಾರರಿಗೆ ಮರ್ಯಾದೆ ಅದ ತಕ್ಷಣ ಭಟ್ಟರ್ ಶ್ರೀವೈಷ್ಣವರಿಗೆ ಅರುಳಪ್ಪಾಡು ಹೇಳಿದ ತಕ್ಷಣ ನಮ್ಮಾಳ್ವರ್ ದಿವ್ಯಪ್ರಬಂಧದ ಒಂದು ಪಾಶುರ ಪ್ರಾರಂಭಿಸುತ್ತಾರೆ. ನಂತರ ಅರೈಯರ್ ಕವಿತೆಯ ಸುತ್ತು ವೀಣೆ ನಂತರ ನಿವೇದನ ತೀರ್ಥ ವಿನಿಯೋಗ ನಡೆದ ಬಳಿಕ ದೇವಾಲಯಕ್ಕೆ ಉತ್ಸವ ಒಳಪಡಿಯೇತ್ತದಿಂದ ಅಸ್ಥಾನಕ್ಕೆ ಬಿಜಯ ಮಾಡಿಸುತ್ತಾರೆ. ಶ್ರೀ ಚಲುವನಾರಾಯಣಸ್ವಾಮಿಯವರ ಅಸ್ಥಾನದಲ್ಲಿ ವಿಶೇಷ ಪೂಜೆ ಆಳ್ವಾರ್ ಅಚಾರ್ಯರ ಪಕ್ಕದಲ್ಲಿ ಬಿಜಯ ಮಾಡಿಸಿರುವ ಸನ್ನಿವೇಶ ತುಂಬಾ ರಮ್ಯವಾಗಿ ವೈಕುಂಠ ದರ್ಶನವಾದಂತೆ ಆಗುತ್ತದೆ. ಇದರಲ್ಲಿ ನಾಲ್ಕನೆ ದಿನ ಒರುನಾಯಗಂ ನಮ್ಮಾಳ್ವಾರ್‍ರವರು ರಚಿಸಿರುವ ನಮ್ಮ ಶ್ರೀತಿರುನಾರಾಯಣನಿಗೆ ಅರ್ಪಿತವಾದ ಪದ್ಯಸಾರ, ಇದರ ವ್ಯಾಖ್ಯಾನವನ್ನು ದೇವಸ್ಥಾನದಲ್ಲಿ ಅರೈಯರ್ ರವರು ವ್ಯಾಖ್ಯಾನ(ಅರ್ಥ ವಿವರಣೆ)ಮಾಡುತ್ತಾರೆ. ಇದೆ ರೀತಿ ಹತ್ತು ದಿನಗಳೂ ಜರುಗುತ್ತದೆ. ಹತ್ತನೆ ದಿನ ನಮ್ಮಾಳ್ವಾರ ಪರಮಪದ ಉತ್ಸವ, ಅಂದು ನವರಂಗದಲ್ಲಿ ಚಲುವರಾಯಸ್ವಾಮಿಯನ್ನು ಬಿಜಯ ಮಾಡಿಸಿ ಎರಡೂ ಪಕ್ಕದಲ್ಲೂ ಅಳ್ವಾರ್ ಅಚಾರ್ಯರನ್ನು ಬಿಜ ಮಾಡಿ, ನಮ್ಮಾಳ್ವಾರ್ ರವರನ್ನು ಛತ್ರಿ ಸಲಾಮ ಸೂರ್ಯಪಾನ ಮರ್ಯಾದೆಯಿಂದ ಅಂತರಂಗದ ಪರಿಚಾರಕರು ಬಿಜಯ ಮಾಡಿಸಿಕೊಂಡು ಸ್ವಾಮಿ ಪಾದದಲ್ಲಿ ಬಿಜಯ ಮಾಡಿಸುವ ಸೇವೆ ಬಹಳ ವಿಶೇಷವಾಗಿದ್ದು, ನೋಡಲು ರಮ್ಯವಾಗಿದೆ.

ಸಂಕ್ರಾಂತಿ

ಉತ್ತರಾಯಣ ಪುಣ್ಯಕಾಲ ಹಾಗೂ ಸಂಕ್ರಾಂತಿಯ ನಿಮಿತ್ತ ಬೆಳಿಗ್ಗೆ ಶ್ರೀ ಚಲುವರಾಯಸ್ವಾಮಿ ಅಮ್ಮನವರು ಆಳ್ವಾರ್ ಅಚಾರ್ಯರಿಗೆ ಅಭಿಷೇಕ ಸಾಯಂಕಾಲ ಯತಿರಾಜದಾಸರ(ನಾಲ್ಕನೆ ಸ್ವಾಮ್ಯದ ಸ್ಥಾನೀಕರು ಐಂಬತ್ತಿರುಮ್‍ರಲ್ಲಿ ಒಬ್ಬರು) ಅವರ ಮನೆಯ ಮುಂದೆ ಪುಷ್ಪಧಾರಣೆ. ಶ್ರೀ ಚಲುವರಾಯಸ್ವಾಮಿಯವರಿಗೆ ಉತ್ಸವವಾಗುವ ಮಧ್ಯ ನಂತರ ಉತ್ಸವ ಮುಂದುವರಿದು ಸಂಕ್ರಾಂತಿ ಮಂಟಪ(ದೇಶಿಕರ ಸನ್ನಿಧಿ)ಕ್ಕೆ ಉತ್ಸವ ಸೇರಿ ನಂತರ ಜೋಯಿಸರಿಂದ ಸಂಕ್ರಾಂತಿ ಫಲಪಠನ ನಂತರ ನಾಲ್ಕನೆ ಸ್ವಾಮ್ಯದಲ್ಲಿ ಸೇವೆ ನಂತರ ದೇವಾಲಯಕ್ಕೆ ಬರುವಾಗ ಗಂಡಾಮಾಲೆಯವರಿಂದ ಮನೆ ಮುಂದೆ(ಇವರು ನಾಲ್ಕನೆ ಸ್ಥಾನಿಕರು) ಪುಷ್ಪಧಾರಣೆಯಾಗಿ ಒಳಕ್ಕೆ ಉತ್ಸವ ನಂತರ ಅಲಂಕಾರ ತಿರುವರಾಧನೆ ತಿರುನಾರಾಯಣಸ್ವಾಮಿಯವರಿಗೆ ಆಗ ಅರೈಯರ್ ರವರಿಂದ ವಸಂತರಾಗ ವಸಂತಕಾಲದ ಪಠನ ವರ್ಣನೆ ಈ ಮಧ್ಯೆ ನಾಲ್ಕನೆ ಸ್ಥಾನಿಕರಿಂದ ಸ್ವಾಮಿಗೆ ಅಲಂಕಾರ ನಿವೇದನ ಅರ್ಪಣೆ ಅರೈಯರಿಗೆ ಫಲ ಅರ್ಪಣೆ ಅವರಿಂದ ತಿರುನಾಮ ಹೇಳಿಸಿ ಕೊಳ್ಳುವುದು, ನಂತರ ನಾಲ್ಕು ಸ್ಥಾನಿಕರಿಗೂ ಒಂದನೆ ಎರಡನೆ ಮೂರನೆ ಹಾಗೂ ನಾಲ್ಕನೆ ಸ್ಥಾನಿಕರಿಗೆ ಮರ್ಯಾದೆ. ಇದಾದ ನಂತರ ಮಹಾಮಂಗಳಾರತಿಯಾಗಿ ನಿತ್ಯಗಟ್ಟಲೆಯಿಂದ ಮುಕ್ತಾಯ.

ಅಂಗಮಣಿ ಅಥವಾ ಕನೂ ಉತ್ಸವ ಅಥವಾ ತವರು ಮನೆ ಉತ್ಸವ

ಬೆಳ್ಳಿಗೆ ಶ್ರೀಉಭಯನಾಚ್ಚಿಯಾರ್‍ಗೆ ಒಂದನೆ ಸ್ಥಾನಿಕರವರಿಂದ ಅಭಿಷೇಕ ನಂತರ ಕಲ್ಯಾಣಿಗೆ ಉತ್ಸವದಲ್ಲಿ ಕಲ್ಯಾಣಿ ಪೂಜೆ ಅಲಂಕಾರ ತಿರುವಾರಾಧನೆ ಒಂದನೆ ಸ್ವಾಮ್ಯದವರಿಗೆ ಅರೈಯರ್ ತಿರುನಾಮ ಹೇಳಿಕೆ, ನಾಲ್ಕು ಸ್ಥಾನಿಕರಿಗೂ ಮರ್ಯಾದೆ, ನಂತರ ಒಂದನೆ ಸ್ವಾಮ್ಯದವರಿಗೆ ಭಟ್ಟರವರಿಂದ ಅರುಳಪ್ಪಾಡು. ದೇವಾಲಯಕ್ಕೆ ಉತ್ಸವ ರಾತ್ರಿ ಅಮ್ಮನವರ ತವರುಮನೆ ಉತ್ಸವ ಶ್ರೀಭೂದೇವಿಯವರಿಗೆ ಮಡಿಶಾರು ಸೀರೆ ತಲೆಮುಡಿಗೆ(ಶ್ರೀವೈಷ್ಣವರು ಉಡುವಸೀರೆ) ಅಲಂಕಾರ ಅಂಗಮಣಿ ಮಂಟಪ(ಸಜ್ಜೆಹಟ್ಟಿಗೆ)ಕ್ಕೆ ಉತ್ಸವದಲ್ಲಿ ಒಂದನೆ ಸ್ಥಾನಿಕರು ತಿರುವನಂತಪುರದವರು ದಂಪತಿ ಸಹಿತ ಅಮ್ಮನವರು ಮಡಿಲು ತುಂಬುತ್ತಾರೆ. ಎಲ್ಲಾ ವಿಧದ ಹಣ್ಣುಕಾಯಿಗಳಿಂದ ಅದೆ ಸಜ್ಜೆಹಟ್ಟಿಯವರು ಕೂಡ ಮಡಿಲು ತುಂಬುತ್ತಾರೆ. ದೇವಾಲಯದಿಂದ ಅಮ್ಮನವರ ಉತ್ಸವ ಇಲ್ಲಿಗೆ ಬರುವಾಗ ಅಗಸರು ನಡೆಮುಡಿಯನ್ನು ಹಾಸುತ್ತಾರೆ. ಉದ್ದಕ್ಕೂ ಎಲೆ ಅಡಿಕೆ  ನಿವೇದನವಾಗುತ್ತದೆ. ಮಂಟಪದಲ್ಲಿ ಸೇವೆ ವಿಶೇಷ ಪೂಜೆ ಅದ ನಂತರ ನಾಲ್ಕು ಸ್ಥಾನಿಕರಿಗೆ ಮರ್ಯಾದೆಯಾದ ಬಳಿಕ ತಿರುವನಂತಪುರದವರಿಗೆ ಅರುಳಪ್ಪಾಡು ಆದ ಬಳಿಕ ಊರಿನಲ್ಲಿ ಉತ್ಸವವಾಗಿ ದೇವಾಲಯ ಸೇರುವುದರೊಳಗಾಗಿ ಚಲುವರಾಯಸ್ವಾಮಿಗೆ ಮುನಿಸು, ಉತ್ಸವ ವೇಗದಲ್ಲಿ ನಡೆದು, ಕುದುರೆವಾಹನ ಪಾರ್ವಟೆಗೆ ಹೋಗುತ್ತದೆ. ಮಾರ್ಗಮಧ್ಯ ಮೊಲ ಬಿಡುತ್ತಾರೆ. ಇಲ್ಲಿಗೆ ಶಕುನ ಸರಿಯಿಲ್ಲವೆಂದು ಚಲುವರಾಯನ ಉತ್ಸವ, ದೇವಾಲಯಕ್ಕೆ ಮರಳುವುದು. ಇದೊಂದು ಮೋಡಿಕೆ(ತಮಾಷೆ) ಉತ್ಸವ. ಇದು ನೋಡಲು ತುಂಬಾ ರಮ್ಯ. ಮಧ್ಯಾಹ್ನದ ಮೇಲೆ ಹೇಳಿದ ಎರಡು ಮನೆಯಲ್ಲೂ ಹಣ್ಣುಹಂಪಲುಗಳ ತಟ್ಟೆಯನ್ನು ಅಲಂಕಾರದಿಂದ ಜೋಡಿಸಿ ಎಲ್ಲರನ್ನು ಕರೆದು ಹೂವುಹಣ್ಣು ಕೊಡುವುದು ಇದೇ ಅಂಗಮಣಿ. ಅದಾದ ಮಾರನೆ ದಿನ ಆಳ್ಳಂತಳ್ಳಂ ಚರಪುಸೇವೆ. ಅಂದು ದೇವಾಲಯದಲ್ಲಿ ಒಂದು ಮಂಚದ ಮೇಲೆ ತೊಂಡನೂರು ನಂಬಿ ಮನೆಯವರು ಅನ್ನವನ್ನು ಬಾಚುತ್ತಾರೆ. ಹಿಂದಿನಿಂದ ಕುಂಬಳಕಾಯಿ ಪಲ್ಯವನ್ನು ಅವರ ಬೆನ್ನ ಮೇಲೆ ಮೊದಲ ಸ್ವಾಮ್ಯದವರು ತಟ್ಟುತ್ತಾರೆ. ಆಗ ಅವರು ಮುಂದೆ ಹೋಗುತ್ತ ಎಲ್ಲೆಡೆಗೂ ಒದರುತ್ತಾರೆ. ಆಗ ಎಲ್ಲರೂ ನಗುವುದು ಇದೊಂದು ತಮಾಷೆ ಉತ್ಸವ. ಇದು ಮೊದಲ ಸ್ವಾಮ್ಯದವರ ಸೇವೆ.

ಪುನರ್ವಸು

ಇದು ಜನವರಿ-ಫೆಬ್ರವರಿ ತಿಂಗಳಲ್ಲಿ ಬರುತ್ತದೆ. ಅಂದು ಅಚಾರ್ಯ ರಾಮಾನುಜಾಚಾರ್ಯರು ಮೇಲುಕೋಟೆಯನ್ನು ಜೀರ್ಣೋದ್ಧಾರ ಮಾಡಿದ ದಿನ. ಅಂದು ಬೆಳಗಿನ ಜಾವ ರಾಮಾನುಜರಿಗೆ ಅಭಿಷೇಕ, ಕಲ್ಯಾಣಿಗೆ(ತೊಣ್ಣುರು ಉತ್ಸವ) ಉತ್ಸವ, ಅಲ್ಲಿ ಗದ್ಯತ್ರಯ ಪಾರಾಯಣ ನಂತರ ಊರಿನ ಸುತ್ತ ಉತ್ಸವ ವಂಗಿಪುರಂ ನಂಬಿಗಳ ಮನೆ ಮುಂದೆ ಅಚಾರ್ಯರಿಗೆ ಪುಷ್ಪಧಾರಣೆ ಅರ್ಪಣೆ. ಒಳಗೆ ಬಿಜಯ ಮಾಡಿದ ತಕ್ಷಣ ಮಹಾಮಂಗಾಳಾರತಿಯಿಂದ ಸೇವೆ ಅಚಾರ್ಯರಿಗೆ ಪರಿವಟ್ಟ ಮರ್ಯಾದೆ. ಇದಾದ ನಂತರ ಸುಕನಾಸಿಗೆ ರಾಮಾನುಜರೆ ಖುದ್ದು ದೇವರ ಪೂಜೆ ಮಾಡಿದ ಸನ್ನಿವೇಶ, ರಾತ್ರಿ ಅಸ್ಥಾನಕ್ಕೆ ರಾಮಾನುಜರಿಗೆ ಉತ್ಸವ.

ರಥಸಪ್ತಮಿ

ಅಂದು ವಿಶೇಷ ಪೂಜೆಯಾದ ತಕ್ಷಣ ಸೂರ್ಯಮಂಡಲವಾಹನ ಬೆಳಗಿನ ಏಳು ಗಂಟೆಯ ವೇಳೆಗೆ ನಡೆದು ಬರುತ್ತದೆ. ನಂಜಿಯರ ಸನ್ನಿಧಿ ಸಮೀಪಕ್ಕೆ(ಮಾರಿಗುಡಿ ಜಾಗ) ಬರುವ ವೇಳೆಗೆ ಸರಿಯಾಗಿ ಭಗವಂತನಿಗೆ ಸೂರ್ಯದರ್ಶನ.

ದಿಲ್ಲಿ ಉತ್ಸವ

ಶ್ರೀ ಚಲುವರಾಯಸ್ವಾಮಿಯನ್ನು ರಾಮಾನುಜರು ಮೇಲುಕೋಟೆಗೆ ಬಿಜಯ ಮಾಡಿಸಿಕೊಂಡು ಬಂದ ಉತ್ಸವ, ಅಂದು ಶ್ರೀಸ್ವಾಮಿಗೆ ಪಲ್ಲಕ್ಕಿ ಉತ್ಸವ, ವೇದಾಂತಚಾರ್ಯರ ಸನ್ನಿಧಿಗೆ ಇದಕ್ಕೆ ಮೊದಲು ಅಭಿಷೇಕ ಈ ಉತ್ಸವ ಮಾರ್ಚ್ ತಿಂಗಳಲ್ಲಿ ನಡೆಯುತ್ತದೆ. ಅಪರೂಪಕ್ಕೆ ಫೆಬ್ರವರಿ ಕಡೆಯಲ್ಲೂ ಬರುವುದು ಉಂಟು. ಇದಾದ ನಂತರವೆ ಬ್ರಹ್ಮೋತ್ಸವದ(ವೈರಮುಡಿ ಜಾತ್ರೆ) ಚಟುವಟಿಕೆ ಊರಿನಲ್ಲಿ ಪ್ರಾರಂಭವಾಗುವುದು.

ತೆಪ್ಪೋತ್ಸವ

ಇದು ಮಾರ್ಚ್ ತಿಂಗಳಲ್ಲಿ ನಡೆಯುತ್ತದೆ. ಮೊದಲ ದಿನ ಅಂಕುರಾರ್ಪಣವಾಗಿ ಎರಡನೆ ಮೂರನೆ ದಿನ ಇಲ್ಲಿಯ ತೆಪ್ಪಕೊಳಕ್ಕೆ (ತೆಪ್ಪಕೊಳ ಮಂಟಪ) ರಾಮಾನುಜರ ಸಹಿತ ಉತ್ಸವ, ನಂತರ ರಾತ್ರಿ ವಾಹನ ಉತ್ಸವ ಪಡಿಯೇತ್ತ ಆಗಿ ಮುಕ್ತಾಯ, ಮೂರನೆ ದಿನ ಉತ್ಸವವಾಗಿ ಎರಡನೆ ದಿನದಂತೆಯೆ ನಡೆದು, ಕಲ್ಯಾಣಿಗೆ ಬಿಜಯ ಮಾಡಿಸಿ ತೆಪ್ಪ ನಡೆಯುತ್ತದೆ. ಜೋಯಸರು ಮುಹೂರ್ತ ಹೇಳಿದ ನಂತರ ತೆಪ್ಪಕ್ಕೆ ಏರಿಕೆ.

ಶ್ರೀಕೃಷ್ಣರಾಜಮುಡಿ ಉತ್ಸವ

ಇದು ಅಷಾಢ ಮಾಸದಲ್ಲಿ ನಡೆಯುವ(ಚಿಕ್ಕಜಾತ್ರೆ), ಕೃಷ್ಣರಾಜ ಒಡೆಯರ್ ರವರಿಂದ ಪ್ರಾರಂಭವಾದ ಜಾತ್ರೆ. ಶ್ರೀ ಮುಮ್ಮಡಿಕೃಷ್ಣರಾಜಒಡೆಯರ್ ರವರ ಜನ್ಮದಿನದಂದು ಶ್ರೀನಾರಾಯಣಸ್ವಾಮಿ ಮತ್ತು ಚಲುವರಾಯಸ್ವಾಮಿ ಅಮ್ಮನವರು ಎಲ್ಲರಿಗೂ ಮಹಾಭಿಷೇಕ. ಸಾಯಂಕಾಲ ಕಲ್ಯಾಣೋತ್ಸವ,ಆಷಾಢ ಬಹುಳ ಉತ್ತಾರಾಷಾಢದಿಂದ ರೋಹಿಣಿಯವರೆಗೂ ನಡೆಯತ್ತದೆ. ಇದು ವೈರಮುಡಿ ಜಾತ್ರೆಯಂತೆಯೇ ನಡೆಯುತ್ತದೆ. ನಾಲ್ಕನೆ ದಿನಕೃಷ್ಣರಾಜ ಒಡೆಯರು ಮಾಡಿಸಿ ಸಮರ್ಪಣೆ ಮಾಡಿದ ಕೃಷ್ಣ ರಾಜಮುಡಿ ಧಾರಣೆ ನಡೆಯುತ್ತದೆ.

ರಾಜಮುಡಿ ಜಾತ್ರೆ ಅಥವಾ ಅಷ್ಟತೀರ್ಥೋತ್ಸವ

ಇದು ಹತ್ತು ದಿನಗಳ ಉತ್ಸವ, ಪ್ರತಿದಿನವೂ ಒಂದೊಂದು ತೀರ್ಥಕ್ಕೆ ಶ್ರೀಯವರ ಪಾದುಕೆ ಬಿಜಯ ಮಾಡಿಸುತ್ತಾರೆ.ನಾಲ್ಕನೆ ದಿನ ರಾಜಮುಡಿಯನ್ನು ಸ್ವಾಮಿಗೆ ಧಾರಣೆ ಮಾಡುತ್ತಾರೆ. ಇದರಲ್ಲಿ ಧ್ವಜಾರೋಹಣ, ತೇರು ಕಳ್ಳರ ಸುಲಿಗೆ, ತೀರ್ಥಸ್ನಾನ ಎಲ್ಲವೂ ನಡೆದು ರಾತ್ರಿವೇಳೆಯಲ್ಲಿ ವಾಹನಗಳು ನಡೆದು ಪಡಿಯೇತ್ತ ಜರುಗುತ್ತದೆ. ಈ ಜಾತ್ರೆಯನ್ನು ರಾಜ ಒಡೆಯರ್ ರವರು ಪ್ರಾರಂಭಿಸಿದ್ದು,ರಾಜ ಒಡೆಯರ್ ರವರು ರಾಜಮುಡಿಯನ್ನು ಈ ಉತ್ಸವ ಮತ್ತು ಗಂಡುಭೇರುಂಡ ಪದಕ, ಪದ್ಮಪೀಠ,ಅಷ್ಟತೀರ್ಥ ಉತ್ಸವವನ್ನು ಹದಿನಾರು ಆಭರಣಗಳನ್ನು ಮುಂತಾದವನ್ನು ಏರ್ಪಡಿಸಿರುತ್ತಾರೆ.

ಆಚಾರ್ಯರಾಮಾನುಜರ ತಿರುನಕ್ಷತ್ರ

ಇದು ಏಪ್ರಿಲ್ ಮೇ ತಿಂಗಳಲ್ಲಿ ಜರುಗುತ್ತದೆ. ಹತ್ತು ದಿನಗಳ ಕಾಲ ನಡೆಯುತ್ತದೆ. ಪ್ರತಿದಿನ ಬೆಳಿಗ್ಗೆ ವಾಹನ ಉತ್ಸವ, ಮಧ್ಯಾಹ್ನ ಅಭಿಷೇಕ, ಸಾಯಂಕಾಲ ಪಲ್ಲಕ್ಕಿ ಉತ್ಸವ ಐದು ವಾಹನ ನಡೆಯುತ್ತದೆ. ನಾಲ್ಕು ಸಾವಿರ ದಿವ್ಯ ಪ್ರಬಂಧ ಪಠನ ಆರನೇ ದಿನ. ಆಚಾರ್ಯರಿಗೆ ಮುಡಿಯ ಉತ್ಸವ ಜರುಗುತ್ತದೆ. ಅದಾದ ಮಾರನೆ ದಿನದಿಂದ ಐಂಬತ್ತಿರುವರ ಮೊದಲನೆ ಸ್ವಾಮ್ಯದವರ ಭಿಕ್ಷಾಕೈಂಕರ್ಯ. 8ನೇ ದಿನ ಆಚಾರ್ಯರಿಗೆ ಉತ್ಸವ ,ಮೂರನೆ ಸ್ವಾಮ್ಯದವರ ಭಿಕ್ಷಾಕೈಂಕರ್ಯ, ರಾತ್ರಿ ನಾಲ್ಕನೆ ಸ್ವಾಮ್ಯದವರಿಂದ ಬಿಕ್ಷಾಕೈಂಕರ್ಯ. 9ನೇ ದಿನ ರಥೋತ್ಸವ, ಅಂದು ಸಾಯಂಕಾಲ ಯತಿರಾಜ ಮಠಕ್ಕೆ ಆಚಾರ್ಯರಿಗೆ ಉತ್ಸವ, ರಾತ್ರಿ ನಾಲ್ಕನೆ ಸ್ವಾಮ್ಯದವರಿಂದ ಭಿಕ್ಷಾಕೈಂಕರ್ಯ, 10ನೆ ದಿನ ಬೆಳಿಗ್ಗೆ ವಾಹನ ತಿರುನಕ್ಷತ್ರ ಪ್ರಯುಕ್ತ ಆಚಾರ್ಯರಿಗೆ ಹನ್ನೆರಡು ತಿರುವಾರಾಧನೆಯಿಂದ ಅಭೀಷೇಕ, ನಂತರ ಶ್ರೀ ನಾರಾಯಣಸ್ವಾಮಿ ಸನ್ನಿಧಿಯಿಂದ ಆಚಾರ್ಯರಿಗೆ ಮರ್ಯಾದೆಯಾದ ಬಳಿಕ ಶಾತ್ತುಮೊರೈ. ರಾತ್ರಿ ಗಂಧ ಸೇವೆಯಿಂದ ಪಲ್ಲಕಿಯಲ್ಲಿ ಸೀತಾರಣ್ಯಕ್ಕೆ ಉತ್ಸವ ಅಲ್ಲಿ ಎರಡನೇ ಸ್ವಾಮ್ಯದವರಿಂದ ಭಿಕ್ಷಾಕೈಂಕರ್ಯ, ಇದಾದ ನಂತರ ವೇದಾಂತ ದೇಶಿಕರು ಮತ್ತು ಮನವಾಳ ಮಾಮುನಿ ಅಚಾರ್ಯ ಸನ್ನಿಧಿಗೆ ಉತ್ಸವ, ನಂತರ ಶ್ರೀ ಚಲುವರಾಯಸ್ವಾಮಿ ದಶಾವತಾರ ಸೇವೆಯನ್ನು ರಾಮಾನುಜರಿಗೆ ಕೊಡುವ ಉತ್ಸವ, ಇದಾದ ನಂತರ ರಾಮಾನುಜರ ಸನ್ನಿಧಿಗೆ ಉತ್ಸವ. ಅಲ್ಲಿ ಮಹಾಮಂಗಳ ನಡೆದು ಆಸ್ಥಾನಕ್ಕೆ ಮರಳುತ್ತಾರೆ. ಮಾರನೆ ದಿನ ಗಂಧಪುಡಿ ಉತ್ಸವ ಸೀತಾರಣ್ಯದಲ್ಲಿ ಜರುಗುತ್ತದೆ. ಅಂದು ಬೆಳಿಗ್ಗೆ ಮೊದಲಿಯಾಂಡಾನ್ ತಿರುನಕ್ಷತ್ರದ ಪ್ರಯುಕ್ತ ಆಚಾರ್ಯರಿಗೆ ಅಭಿಷೇಕ, ನಾಲಾಯಿರಂ ಶಾತ್ತುಮೊರೈ ನಡೆಯುತ್ತದೆ. ಮೇಲುಕೋಟೆಯಲ್ಲಿ ನಮ್ಮಾಳ್ವಾರ್, ತಿರುಮಂಗೈಯಾಳ್ವಾರ್, ವೇದಾಂತಚಾರ್ಯ, ಜೀಯರ್, ಪಿಳ್ಳೈಲೋಕಾಚಾರ್ಯರ ಮೊದಲಾದ ಆಳ್ವಾರ್ ಆಚಾರ್ಯರ ತಿರುನಕ್ಷತ್ರ ಸೇವೆ ಹತ್ತು ದಿನಗಳು ನಡೆಯುತ್ತದೆ. ಇನ್ನು ಅನೇಕ ಸಣ್ಣ ಪುಟ್ಟ ಉತ್ಸವಗಳಿವೆ.

ಉಪಯುಕ್ತ ಮಾಹಿತಿ

ಶ್ರೀ ಚಲುವನಾರಾಯಣಸ್ವಾಮಿ ದೇವಾಲಯದ ದರ್ಶನ ವೇಳೆ -

 • ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 1.00 ಘಂಟೆಯವರೆಗೆ.
 • ಸಂಜೆ 4.00 ರಿಂದ ಸಂಜೆ 6.00 ಘಂಟೆಯವರವಿಗೆ.
 • ರಾತ್ರಿ 7.00 ರಿಂದ ರಾತ್ರಿ 8.00 ಘಂಟೆಯವರೆವಿಗೆ.

ವಿಶೇಷ ದಿನಗಳು [ಶನಿವಾರ, ಭಾನುವಾರ ಮತ್ತು ಸರ್ಕಾರಿ ರಜಾದಿನಗಳು ] -

 • ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 1.30 ಘಂಟೆಯವರೆಗೆ.
 • ಸಂಜೆ 3.30 ರಿಂದ ಸಂಜೆ 6.00 ಘಂಟೆಯವರವಿಗೆ.
 • ಸಂಜೆ 7.00 ರಿಂದ ಸಂಜೆ 8.00 ಘಂಟೆಯವರವಿಗೆ.

ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ದರ್ಶನ ವೇಳೆ (ಬೆಟ್ಟ)-

 • ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30 ಘಂಟೆಯವರೆಗೆ.
 • ಸಂಜೆ 5.30 ರಿಂದ ರಾತ್ರಿ 8.00 ಘಂಟೆಯವರೆವಿಗೆ.

ಗ್ಯಾಲರಿ